ಜಗತ್ ಪಾಲಕನಾದ ವಿಷ್ಣುವಿನ 8ನೇ ಅವತಾರವೇ ಶ್ರೀಕೃಷ್ಣನ ಅವತಾರ. ಅಜೇಯ ದೈವಿಕ ರೂಪನಾದ ಶ್ರೀಕೃಷ್ಣನು ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ ಪಾಲನೆಗಾಗಿ ಅವತರಿಸಿ ಬಂದ ಎಂದು ಹೇಳಲಾಗುವುದು. ಭಾದ್ರಪದ ಮಾಸ ಕೃಷ್ಣ ಪಕ್ಷದ 8ನೇ ದಿನ ಕೃಷ್ಣನು ಜನಿಸಿದನು. ಈ ಪವಿತ್ರ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ.
ಕೃಷ್ಣನ ಜನನದ ನಂತರ ತಂದೆತಾಯಿಂದ ದೂರವಾಗಿ, ನಂದಗೋಕುಲದಲ್ಲಿ ಬೆಳೆದ ಕೃಷ್ಣನ ಬಾಲ್ಯದಿಂದಲೇ ಅನೇಕ ಕಥೆಗಳು ಹಾಗೂ ಸಾಹಸ ಗೈದಿರುವನು. ಕೃಷ್ಣನ ಬಾಲ ಲೀಲೆಗಳು ಹಾಗೂ ಸಾಹಸ ಕಥೆಗಳು ಇಂದಿಗೂ ಮನುಕುಲಕ್ಕೊಂದು ಆದರ್ಶ ಮಾರ್ಗವನ್ನು ತೋರಿಸಿಕೊಡುವುದು.
ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನನ್ನು ಪ್ರಾಥಮಿಕ ದೇವತೆಯನ್ನಾಗಿ ಆರಾಧಿಸಲಾಗುವುದು. ಕೃಷ್ಣ ಜನ್ಮಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಅದನ್ನು ಕೃಷ್ಣಾಷ್ಟಮಿ, ಕೃಷ್ಣ ಜನ್ಮಾಷ್ಟಮಿ, ಭಡೋ ಅಷ್ಟಮಿ, ರೋಹಿಣಿ ಅಷ್ಟಮಿ, ಕೃಷ್ಣ ಜಯಂತಿ ಎಂದೂ ಸಹ ಕರೆಯುತ್ತಾರೆ. ದಕ್ಷಿಣ ಭಾರತೀಯರ ಪ್ರಕಾರ ಕೃಷ್ಣನು ಶ್ರಾವಣ ಮಾಸದಲ್ಲಿ ಜನಿಸಿದ್ದನು ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸ ಬಿಟ್ಟರೆ ಒಂದೇ ದಿನದಂದು ಆಚರಣೆ ಮಾಡಲಾಗುವುದು.
ಮುರುಳಿ ಮನೋಹರನಾದ ಭಗವಾನ್ ಶ್ರೀಕೃಷ್ಣನು ಹುಟ್ಟಿದ ರಾತ್ರಿ 5 ವಿಶಿಷ್ಟ ಘಟನೆಗಳು ನಡೆದಿದೆ.
ಭಗವಾನ್ ಕೃಷ್ಣನು ಜೈಲಿನಲ್ಲಿ ಜನಿಸಿದನು. ಕಂಸನು ಕೃಷ್ಣನ ತಂದೆ ಮತ್ತು ತಾಯಿಯನ್ನು ಸೆರೆಯಲ್ಲಿಟ್ಟಾಗ ಅದೇ ಸಮಯದಲ್ಲಿ ಶ್ರೀಕೃಷ್ಣನ ಜನನವಾಗುತ್ತದೆ. ಕೃಷ್ಣ ಜನಿಸಿದಾಗ ಇದ್ದಕ್ಕಿದ್ದಂತೆ ಜೈಲಿನ ಕಾವಲಿಗರು ನಿದ್ರೆಗೆ ಜಾರುತ್ತಾರೆ. ಅಷ್ಟು ಮಾತ್ರವಲ್ಲ, ಜೈಲಿನ ಬಾಗಿಲು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ತೆರೆದುಕೊಂಡಿತು. ಅದೇ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಕೃಷ್ಣನ ತಂದೆ ವಾಸುದೇವನು ಪುಟ್ಟ ಕೃಷ್ಣನನ್ನು ಬುಟ್ಟಿಯಲ್ಲಿಟ್ಟುಕೊಂಡು ಭಾರೀ ಮಳೆಯಲ್ಲೇ ತನ್ನ ಕಂದನನ್ನು ಕಂಸನಿಂದ ರಕ್ಷಿಸಲು ಜೈಲಿನಿಂದ ಹೊರಬರುತ್ತಾನೆ.
ಶ್ರೀಕೃಷ್ಣ ಹುಟ್ಟಿದ ಸಮಯದಲ್ಲಿ ಭಾರೀ ಮಳೆಯಾಗಿತ್ತು. ಮಳೆಯ ಅಬ್ಬರಕ್ಕೆ ಯಮುನಾ ನದಿ ಉಕ್ಕಿ ಹರಿಯಲು ಆರಂಭಿಸಿತ್ತು. ಇತ್ತ ಕೃಷ್ಣನ ತಂದೆ ವಾಸುದೇವರು ಬುಟ್ಟಿಯಲ್ಲಿ ಪುಟ್ಟ ಕೃಷ್ಣನನ್ನು ಇಟ್ಟುಕೊಂಡು ಯಮುನಾ ನದಿಯನ್ನು ಪ್ರವೇಶಿಸುತ್ತಲೇ ದೊಡ್ಡ ಪವಾಡವೊಂದು ನಡೆಯಿತು. ಯಮುನಾ ನದಿಯ ನೀರು ಬುಟ್ಟಿಯಲ್ಲಿದ್ದ ಕೃಷ್ಣನ ಪಾದಗಳನ್ನು ಮುಟ್ಟಿ, ನಂತರ ವಾಸುದೇವನಿಗೆ ಗೋಕುಲದತ್ತ ಹೋಗಲು ದಾರಿ ಮಾಡಿ ಕೊಟ್ಟಿತು.
ವಾಸುದೇವ ತನ್ನ ಕಂದ ಕೃಷ್ಣನನ್ನು ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋದಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ವಾಸುದೇವನು ತನ್ನ ಮಗ ಕೃಷ್ಣನನ್ನು ಯಶೋದಾಳ ಮಡಿಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.
ದಂತಕಥೆಯ ಪ್ರಕಾರ, ಹೆಣ್ಣು ಮಗು ಜನಿಸಿದಾಕ್ಷಣ ವಾಸುದೇವ ತನ್ನಲ್ಲಿಗೆ ಬರುತ್ತಾನೆಂಬುದು ನಂದನಿಗೆ ತಿಳಿದಿತ್ತು. ಆದ್ದರಿಂದ ಅವನು ತನಗೆ ಹೆಣ್ಣು ಮಗು ಜನಿಸಿದಾಕ್ಷಣ ಬಾಗಿಲಲ್ಲಿ ವಾಸುದೇವನಿಗಾಗಿ ಕಾಯುತ್ತಿದ್ದನು. ನಂತರ ವಾಸುದೇವನು ಬಂದ ಕೂಡಲೇ ನಂದನು ತನ್ನ ಮಗಳನ್ನು ವಾಸುದೇವನ ಮಡಿಲಲ್ಲಿಟ್ಟನು. ಆದರೆ ಈ ಘಟನೆಯ ನಂತರ ವಾಸುದೇವ ಮತ್ತು ನಂದರಿಬ್ಬರೂ ಕೂಡ ಯೋಗಮಾಯ ಪ್ರಭಾವದಿಂದ ಎಲ್ಲವನ್ನು ಮರೆತಿದ್ದರು ಎನ್ನಲಾಗಿದೆ.
ಇದು ನಂಬಿಕೆಗಳ ಆಧಾರದ ಮೇಲೆ ಭಗವಾನ್ ಕೃಷ್ಣನ ಜನನವು ಭಿನ್ನ ಬಿನ್ನ ಅಭಿಪ್ರಾಯವನ್ನು ನಿಡುತ್ತದೆ.
